ಟಾಸ್ಮೇನಿಯ
ಆಸ್ಟ್ರೇಲಿಯ ಕಾಮನ್‍ವೆಲ್ತಿನ ಅತ್ಯಂತ ಸಣ್ಣ ರಾಜ್ಯ. ಮುಖ್ಯ ಭೂಪ್ರದೇಶದ ಆಗ್ನೇಯ ತುದಿಯ ದಕ್ಷಿಣಕ್ಕಿರುವ ಟಾಸ್ಮೇನಿಯ ಎಂಬ ಹೆಸರಿನ ದೊಡ್ಡ ದ್ವೀಪವೂ ಅನೇಕ ಸಣ್ಣ ದ್ವೀಪಗಳೂ ಸೇರಿ ಈ ರಾಜ್ಯ ಆಗಿದೆ. ಟಾಸ್ಮೇನಿಯ ದ್ವೀಪವನ್ನು 150 ಮೈ. (240ಕಿಮೀ.) ಅಗಲದ ಬ್ಯಾಸ್ ಜಲಸಂಧಿ ಆಸ್ಟ್ರೇಲಿಯದಿಂದ ಬೇರ್ಪಡಿಸುತ್ತದೆ. ಗುರಾಣಿಯ ಆಕಾರದಲ್ಲಿರುವ ಈ ದ್ವೀಪದ ಉದ್ದ 180 ಮೈ. (290 ಕಿಮೀ.), ಗರಿಷ್ಠ ಅಗಲ 190 ಮೈ. (306 ಕಿಮೀ.), ವಿಸ್ತೀರ್ಣ 24,450 ಚ.ಮೈ. (63,326 ಚ.ಕಿಮೀ.). ಇಡೀ ರಾಜ್ಯದ ವಿಸ್ತೀರ್ಣ 26,215 ಚ.ಮೈ. (67,897 ಚ.ಕಿಮೀ.). ಇದು ಆಸ್ಟ್ರೇಲಿಯದ ಒಟ್ಟು ವಿಸ್ತೀರ್ಣದ ಸೇ. 1ಕ್ಕಿಂತ ಕಡಿಮೆ. ಜನಸಂಖ್ಯೆ 3,92,500 (1970 ಅಂ.) ರಾಜ್ಯದ ರಾಜಧಾನಿ ಹೋಬಾರ್ಟ್.

ಭೂವಿಜ್ಞಾನ: ಟಾಸ್ಮೇನಿಯ ವಾಸ್ತವವಾಗಿ ಮೆಸೊeóÉೂೀಯಿಕ್ ಕಾಲದಲ್ಲಿ ಉಂಟಾದ ಸ್ತರಭಂಗದಿಂದ ಪೂರ್ವ ಆಸ್ಟ್ರೇಲಿಯದ ಎತ್ತರ ಪ್ರದೇಶದಿಂದ ಬೇರ್ಪಡಿಸಲ್ಪಟ್ಟ ಒಂದು ಭೂಭಾಗ. ಹೊರವಲಯದ ಶಿಲಾರಚನೆ ಮಧ್ಯ ಜೀವಿಯುಗದ ಕ್ವಾರ್ಟ್eóÉೈಟ್, ಸಿಸ್ಟ್, ನೀಸ್ ಮುಂತಾದ ಶಿಲೆಗಳನ್ನೊಳಗೊಂಡಿದೆ. ಪಶ್ಚಿಮ ಮತ್ತು ವಾಯವ್ಯ ಭಾಗದ ವಿಮುಖಾವನತಬಾಹು ಪ್ರದೇಶದಲ್ಲಿ ಇತ್ತೀಚಿನ ಸ್ಲೇಟ್, ಕ್ವಾರ್ಟ್‍ಜೈಟ್, ಡಾಲೊರೈಟ್ ಮುಂತಾದ ಶಿಲೆಗಳಿಂದ ಕೂಡಿದ ಶ್ರೇಣಿಯೊಂದು ಆಗ್ನೇಯ-ವಾಯವ್ಯವಾಗಿ ಕಿಂಗ್ ದ್ವೀಪದವರೆಗೂ ಹಬ್ಬಿದೆ. ಉತ್ತರ ಹಾಗೂ ಪಶ್ಚಿಮವಲಯದ ಹೆಚ್ಚು ಭಾಗಗಳಲ್ಲಿ ಸುಮಾರು 10,000' ಗೂ ದಪ್ಪವಾದ ಆದಿ ಮತ್ತು ಮಧ್ಯ ಕೇಂಬ್ರಿಯನ್ ಶಿಲೆಗಳು ಹರಡಿವೆ. ಪ್ಲೀಸ್ಟೊಸೀನ್ ಹಿಮಯುಗದಲ್ಲಿ ಟಾಸ್ಮೇನಿಯ ಹಿಮಾವೃತವಾಗಿತ್ತು. ಅದರ ಪರಿಣಾಮವಾಗಿ ಭೂವಿನ್ಯಾಸಗಳನ್ನು ಎಲ್ಲಕ್ಕಿಂತ ಸ್ಪಷ್ಟವಾಗಿ ಇಲ್ಲಿ ಕಾಣಬಹುದು. ಹೀಗೆ ಭೂ ಇತಿಹಾಸದ ವಿವಿಧ ಘಟ್ಟಗಳಲ್ಲಿ ಅನೇಕೆ ಘರ್ಷಣೆ, ಆಘಾತ ಮತ್ತು ನಗ್ನೀಕರಣ ಕ್ರಿಯೆಗೆ ಒಳಪಟ್ಟು ಸಮತಟ್ಟಾದ, ಶಿರೋಭಾಗವುಳ್ಳ ಅನೇಕ ವೇದಿಕೆಗಳಂತಿರುವ ಭೂಪ್ರದೇಶಗಳಿಂದ ಕೂಡಿದ ವೈವಿಧ್ಯಮಯ ಭೂಲಕ್ಷಣಗಳಿವೆ. 

ಭೌತಲಕ್ಷಣ: ಟಾಸ್ಮೇನಿಯದ ಬಹುಭಾಗ ಪರ್ವತಭೂಯಿಷ್ಠವಾದ್ದು. ಇದರಲ್ಲಿ ಖಚಿತವಾದ ಎರಡು ವಿಭಾಗಗಳಿವೆ. ಕ್ರೇಡಲ್ ಪರ್ವತದ ಸುತ್ತ ವಿಸ್ತರಿಸಿರುವ ಮಧ್ಯವ ಪ್ರಸ್ಥಭೂಮಿ ಮತ್ತು ಈಶಾನ್ಯಕ್ಕಿರುವ ಬೆನ್ ಲೋಮಂಡ್ ಪ್ರಸ್ಥಭೂಮಿ. ಅನೇಕ ದೊಡ್ಡ ಸರೋವರಗಳಿಂದ ಕೂಡಿರುವ ಮಧ್ಯ ಪ್ರಸ್ಥಭೂಮಿ ಸು. 1,200 ಚ.ಮೈ. ವಿಸ್ತಾರವಾಗಿ ತ್ರಿಕೋಣಾಕಾರವಾಗಿದೆ. ಇದು ಟಾಮರ್ ಮತ್ತು ಡರ್ವೆಂಟ್ ನದೀ ವ್ಯವಸ್ಥೆಗಳ ಕಡೆಗೆ ಇಳಿಜಾರಾಗಿದೆ. ಈ ಪ್ರಸ್ಥಭೂಮಿಯನ್ನು ಹಲವು ನದಿಗಳು ಕೊರೆದಿವೆ. ಈ ನದಿಗಳಿಂದಲೂ ಬಿರುಸಾದ ಮಳೆಯಿಂದಲೂ ನಗ್ನೀಕೃತವಾದ ಈ ಪ್ರದೇಶದಲ್ಲಿ ಅನೇಕ ಆಳವಾದ ಕಮರಿಗಳುಂಟು. ಪ್ರಸ್ಥಭೂಮಿಯಿಂದಾಚೆಗೆ ದ್ವೀಪದಲ್ಲಿ  ಹೇಳಿಕೊಳ್ಳುವಂಥ ವೈದಾನವೇ ಇಲ್ಲ. ಉತ್ತರ ಕರಾವಳಿಯಲ್ಲಿ ಟಾಮರ್‍ನಿಂದ ಫೋರ್ತ್‍ವರೆಗೆ ತಗ್ಗಿನ ತಪ್ಪಲು ಬೆಟ್ಟಗಳುಂಟು. ಉಳಿದೆಡೆಗಳಲ್ಲಿ ಅಲ್ಲಲ್ಲಿ ಎತ್ತರದ ಶಿಖರಗಳಿವೆ. ಈಶಾನ್ಯದಲ್ಲಿ ಟಾಮರ್ ಮತ್ತು ಎಸ್ಕ್‍ಗಳ ನಡುವೆ ಇರುವ ಉನ್ನತ ಶಿಖರಗಳು ಬ್ಯಾರೊ (4,664') ಮತ್ತು ಲೆಗ್ಸ್ (ಬೆನ್ ಲೋಮಂಡ್) (5,160') ; ಆಗ್ನೇಯದಲ್ಲಿ ಸೇಂಟ್ ಪಾಲ್ಸ್ ಡೋಮ್ (3,368') ; ಪಶ್ಚಿಮದ ಆರ್ತರ್, ಪೈಮನ್, ಗೋರ್ಡನ್ ಮತ್ತು ಹ್ಯೂಆನ್ ನದೀ ಕಣಿವೆಗಳಿಂದ ಕೂಡಿದ ವಿಶಾಲ ಪ್ರದೇಶದ ಅಂಚಿನಲ್ಲಿ ಕ್ರೇಡಲ್ ಶಿಖರವಿದೆ (5069'). ಇನ್ನೊಂದು ಶಿಖರ ಓಸ್ (5,305'). ಟಾಸ್ಮೇನಿಯದ ಮುಖ್ಯ ನದಿಗಳು ಡರ್ವೆಂಟ್ (107 ಮೈ.), ಟಾಮರ್ (160 ಮೈ.) ಮತ್ತು ಹ್ಯೂಆನ್ (ಸು.100ಮೈ.) ಇಲ್ಲಿಯ ಸರೋವರಗಳ ಪೈಕಿ, ಉನ್ನತ ಪರ್ವತಗಳ ಮೇಲೆ ಇರುವ ಸೇಂಟ್ ಕ್ಲೇರ್ ಒಂದೇ ಆಳವಾದ್ದು (550'). ಇದರ ವಿಸ್ತೀರ್ಣ 15 ಚ.ಮೈ. ಇತರ ದೊಡ್ಡ ಸರೋವರಗಳೆಲ್ಲ ಬಹಳ ತೆಟ್ಟೆ. ಗ್ರೇಟ್ ಲೇಕ್ 441/2 ಚ.ಮೈ. ಇದೆಯಾದರೂ ಇದು 20' ವಾತ್ರ ಆಳವಾಗಿದೆ.

ಟಾಸ್ಮೇನಿಯಕ್ಕೆ ಸು. 900 ಮೈ. ಉದ್ದದ ತೀರ ಇದೆ. ಇಲ್ಲಿ ಅನೇಕ ಒಳ್ಳೆಯ ನೈಸರ್ಗಿಕ ಬಂದರುಗಳುಂಟು.
ವಾಯುಗುಣ: ಟಾಸ್ಮೇನಿಯ ಮಧ್ಯ ಅಕ್ಷಾಂಶಗಳ, ಪಶ್ಚಿಮ ಮಾರುತಗಳ ವಲಯದ ಉತ್ತರದ ಅಂಚಿನಲ್ಲಿದೆ. ಟಾಸ್ಮೇನಿಯದ ಯಾವ ಭಾಗವೂ ಸಮುದ್ರಕ್ಕೆ ದೂರವಾಗಿಲ್ಲ. ಆದ್ದರಿಂದ ಇದರ ವಾಯುಗುಣ ಮುಖ್ಯವಾಗಿ ಸ್ಥಳೀಯ ಮಾರುತಗಳಿಂದ ನಿಯಂತ್ರಿತ. ಇಲ್ಲಿಯದು ತಂಪಾದ, ಸಮಧಾತುವಾದ, ಬ್ರಿಟಿಷ್ ಮಾದರಿಯ ವಾಯುಗುಣ. ಬೇಸಗೆಯ ಸರಾಸರಿ ಉಷ್ಣತೆ 65ಲಿ ಈ; ಚಳಿಗಾಲದ್ದು 45ಲಿ-50ಲಿ ಈ. ಆದರೆ ಮೇಲ್ಮೈಲಕ್ಷಣಗಳ ವ್ಯತ್ಯಾಸದಿಂದ ಸ್ಥಳೀಯವಾಗಿ ಉಷ್ಣತೆ ವ್ಯತ್ಯಾಸವಾಗುತ್ತದೆ. ಸಾಗರ ಪ್ರವಾಹಗಳ ಪ್ರಭಾವದಿಂದ ಪೂರ್ವ ಕರಾವಳಿಯ ಉಷ್ಣತೆ ಪಶ್ಚಿಮ ಕರಾವಳಿಯದಕ್ಕಿಂತ 2ಲಿ ಹೆಚ್ಚು. ದಕ್ಷಿಣ ಸಾಗರ ಮಾರುತಗಳಿಂದ ಹೆಚ್ಚು ಮಳೆ ಆಗುತ್ತದೆ. ಪಶ್ಚಿಮದಿಂದ ಪೂರ್ವದ ಕಡೆಗೆ ಹೋದಂತೆ ಮಳೆ ಕಡಿಮೆ. ಪಶ್ಚಿಮಕರಾವಳಿಯ ಮಾರ್ಗರೆಟ್ ಸರೋವರದ ಬಳಿ ವಾರ್ಷಿಕ ಸರಾಸರಿ ಮಳೆ ಸು. 146"; ಪೂರ್ವದ ಆಂಟಿಲ್ ಪಾಂಡ್ಸ್ ಬಳಿ 18". ಪೂರ್ವದ ತಗ್ಗು ಭಾಗ ಮಳೆನೆರಳಿನ ಪ್ರದೇಶ. ಇಲ್ಲಿಯದು ಆಸ್ಟ್ರೇಲಿಯದ್ದಕ್ಕಿಂತ ತಂಪಾದ ವಾಯುಗುಣ. ಪೂರ್ವ ಮತ್ತು ಈಶಾನ್ಯ ಭಾಗಗಳನ್ನು ಉಳಿದ ಇತರ ಭಾಗಗಳಲ್ಲಿ ಚಳಿಗಾಲ ಲಂಬಿತ.

ಮಣ್ಣು: ಟಾಸ್ಮೇನಿಯದಲ್ಲಿ ವಿಶೇಷವಾಗಿ ಬೂದುಬಣ್ಣದ ಮರಳು ಮಿಶ್ರಿತ ಮಣ್ಣಿದೆ. ಪಶ್ಚಿಮದ ಆದ್ರ್ರತೆಯ ಎತ್ತರ ಪ್ರದೇಶದ್ದು ಜೇಡಿಮಣ್ಣು. ಮಧ್ಯ ಹಾಗೂ ಆಗ್ನೇಯ ಭಾಗಗಳದು ಕಂದು ಮತ್ತು ಕಪ್ಪು ಮಣ್ಣು. ಡರ್ವೆಂಟ್ ನದಿಯ ಮಧ್ಯ ಕಣಿವೆ ಪ್ರದೇಶದಲ್ಲಿ ಮಾತ್ರ ಮೆಕ್ಕಲು ಮಣ್ಣುಂಟು. ವಾಯವ್ಯ ಮತ್ತು ಈಶಾನ್ಯ ಭಾಗಗಳಲ್ಲಿ ಫಲವತ್ತಾದ ಕೆಂಪು ಜೇಡಿ ಮಣ್ಣಿದೆ. 

ಸಸ್ಯಪ್ರಾಣಿರಾಶಿ: ಟಾಸ್ಮೇನಿಯದ ಸಸ್ಯಪ್ರಾಣಿರಾಶಿ ವೈವಿಧ್ಯಮಯವೂ ವರ್ಣಮಯವೂ ಆದ್ದು. ಒಟ್ಟು ವಿಸ್ತೀರ್ಣದ ಸೇ. 9ರಷ್ಟು ಭಾಗದಲ್ಲಿ ಕಾಡುಗಳಿವೆ. ಟಾಸ್ಮೇನಿಯದ ವಿಶಿಷ್ಟ ವನ್ಯಸಂಪತ್ತಾದ, ಸದಾ ಹೊಳಪಿನ ಹಸಿರು ಎಲೆಗಳಿಂದ ಕಂಗೊಳಿಸುವ ಬೀಚ್ ಕಾಡುಗಳ 50"ಗಿಂತ ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿ ಕಂಡುಬರುತ್ತವೆ. ಮಧ್ಯಸ್ಥ ಮಳೆ ಬೀಳುವ ಭಾಗಗಳಲ್ಲಿ ನೀಲಗಿರಿ ಮರದ ಕಾಡುಗಳಿವೆ. ಪರ್ವತದ ಕಣಿವೆಪ್ರದೇಶಗಳಲ್ಲಿರುವುವು ಪೈನ್ ಕಾಡುಗಳು. ಹೆಚ್ಚು ಮಳೆ ಬೀಳುವ ಪಶ್ಚಿಮ ಭಾಗದಲ್ಲಿ ದಟ್ಟವಾದ ಮರ್ಟಲ್ ಮರಗಳ ಕಾಡುಗಳುಂಟು. ಪೂರ್ವಕ್ಕೆ ಬಂದಂತೆ ಕಾಡು ತೆಳುವಾಗುತ್ತ ಬಂದು ಕ್ರಮೇಣ ಹುಲ್ಲುಗಾವಲು ಸಸ್ಯವರ್ಗ ಕಂಡುಬರುತ್ತವೆ. ಪಶ್ಚಿಮದ ಪರ್ವತಪ್ರದೇಶವನ್ನು ಬಿಟ್ಟು ಉಳಿದೆಡೆಗಳಲ್ಲಿ ಕಾಡುಗಳನ್ನು ಬಹುತೇಕ ಕಡಿಯಲಾಗಿದೆ. ಚೌಬೀನೆ, ಮರದ ತಿರುಳು ಇಲ್ಲಿಯ ಮುಖ್ಯ ಅರಣ್ಯೋತ್ಪನ್ನಗಳು. ಟಾಸ್ಮೇನಿಯದಲ್ಲಿ. ಟಾಸ್ಮೇನಿಯನ್ ಡೆವಿಲ್, ಹುಲಿ ಹಾಗೂ ಟಾಸ್ಮೇನಿಯನ್ ತೋಳಗಳು ಸೇರಿದಂತೆ ಹತ್ತು ಬಗೆಯ ಮಾರ್ಸೂಪಿಯಲ್‍ಗಳೂ 14 ಬಗೆಯ ಪಕ್ಷಿಗಳೂ ಹಲವು ಬಗೆಯ ಹಾವುಗಳೂ ಇವೆ. ಟಾಸ್ಮೇನಿಯನ್ ತೋಳ, ಟಾಸಮೇನಿಯನ್ ಡೆವಿಲ್ ಇವು ಆಸ್ಟ್ರೇಲಿಯದಲ್ಲೂ ಇಲ್ಲ. ಇಲ್ಲಿಯ ಪಕ್ಷಿಗಳಲ್ಲಿ ಇಂಗ್ಲಿಷ್ ಗುಬ್ಬಚ್ಚಿ, ಕಬ್ಬಕ್ಕಿ, ಆತಿ, ಸ್ವರ್ಣಚಟಕ ಮುಖ್ಯವಾದವು.

ಕೃಷಿ: ಟಾಸ್ಮೇನಿಯದಲ್ಲಿ ಬೆಟ್ಟಗುಡ್ಡಗಳೂ ಅತ್ಯಂತ ಆದ್ರ್ರತೆಯಿಂದ ಕೂಡಿದ ವಾಯುಗುಣವೂ ಇರುವುದರಿಂದ ಪೂರ್ವ ಮತ್ತು ಉತ್ತರದ ಪ್ರದೇಶಗಳಲ್ಲಿ ಮಾತ್ರ ವ್ಯವಸಾಯ ವ್ಯಾಪಕವಾಗಿದೆ. ವೈವಿಧ್ಯಮಯ ಕೃಷಿ ಪದ್ಧತಿಯನ್ನು ವಿಶೇಷವಾಗಿ ಅನುಸರಿಸಲಾಗುತ್ತಿದೆ. ಗೋದಿ, ಓಟ್ಸ್, ಬಾರ್ಲಿ, ಆಲೂಗಡ್ಡೆ ಮತ್ತು ಮೇವು ಟಾಸ್ಮೇನಿಯದ ಮುಖ್ಯ ಬೆಳೆಗಳು. ಒಂದು ಕಾಲಕ್ಕೆ ಟಾಸ್ಮೇನಿಯ ಆಸ್ಟ್ರೇಲಿಯದ ಗೋದಿ ಕಣಜವಾಗಿತ್ತು. ಆದರೆ ಈಚೆಗೆ ಇಲ್ಲಿಗೆ ಗೋದಿಯನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಇಲ್ಲಿಯ ಹೆಚ್ಚು ಜನರು ಹೈನುಗಾರಿಕೆ, ಹಂದಿ ಮತ್ತು ಕುರಿ ಸಾಕಣೆ, ಹಂದಿಮಾಂಸದ ಸಂಸ್ಕರಣ ಮುಂತಾದ ವೃತ್ತಿಗಳಲ್ಲಿ ತೊಡಗಿದ್ದಾರೆ. ಜನಸಂಖ್ಯೆ ಹೆಚ್ಚಿ ವಸತಿಗಳು ವಿಸ್ತರಿಸಿದಂತೆಲ್ಲ ಹುಲ್ಲುಗಾವಲಿನ ಪ್ರದೇಶಗಳು ಕಡಿಮೆಯಾಗುತ್ತಿವೆ. ಮಾಂಸ ಮತ್ತು ಉಣ್ಣೆ ಉತ್ಪಾದನೆಗಾಗಿ ಕುರಿಸಾಕಣೆ ಹೆಚ್ಚುತ್ತಿದೆ. ಮೀನುಗಾರಿಕೆ ಉತ್ತರ ಮತ್ತು ಪೂರ್ವತೀರಗಳಿಗೆ ಸೀಮಿತವಾದ್ದು. ಕೃಷಿಯಂತೆ ಮೀನುಗಾರಿಕೆಯೂ ಮುಖ್ಯವಾಗಿ ರಫ್ತಿಗಾಗಿ ನಡೆಯುತ್ತದೆ. ಮೆಲ್ಬರ್ನ್ ಮತ್ತು ಸಿಡ್ನಿಗೆ ವಿಶೇಷವಾಗಿ ಮೀನು ರಫ್ತಾಗುತ್ತದೆ.

    ಖನಿಜ ಸಂಪತ್ತು: ಟಾಸ್ಮೇನಿಯದ ವಿಸ್ತೀರ್ಣಕ್ಕೆ ಅಲ್ಲಿಯ ಖನಿಜ ಸಂಪತ್ತು ಆಸ್ಟ್ರೇಲಿಯದ ಇತರ ರಾಜ್ಯಗಳಿಗಿಂತ ಅಧಿಕ. ಅಗ್ನಿಶಿಲಾರಚನೆಯುಳ್ಳ ಪಶ್ಚಿಮದ ಪರ್ವತ ಭಾಗಗಳಲ್ಲಿ ಲೋಹಖನಿಜ ನಿಕ್ಷೇಪಗಳಿವೆ. ಇವುಗಳಲ್ಲಿ ಬೆಳ್ಳಿ, ಸೀಸ, ತಾಮ್ರ, ಚಿನ್ನ, ತವರ, ಸತು, ಟಂಗ್‍ಸ್ಟನ್, ಓಸ್ಮಿರಿಡಿಯಂ ಮುಖ್ಯವಾದವು. ಆಸ್ಟ್ರೇಲಿಯದಲ್ಲಿ ದೊರಕುವ ಟಂಗ್‍ಸ್ಟನ್ ಟಾಸ್ಮೇನಿಯದ ಕಿಂಗ್ ದ್ವೀಪದಲ್ಲೇ ದೊರೆಯುತ್ತದೆ. ಲೋಹೇತರ ಖನಿಜಗಳಲ್ಲಿ ಕಲ್ಲಿದ್ದಲು, ತೈಲ, ಸುಣ್ಣಕಲ್ಲು, ಜೇಡು ಮುಖ್ಯವಾದವು. ವಿದ್ಯುಚ್ಛಕ್ತಿ ಉತ್ಪಾದನೆಯಿಂದಾಗಿ ಗಣಿಗಾರಿಕೆ ಹೆಚ್ಚು ಅಭಿವೃದ್ಧಿಗೊಳ್ಳುತ್ತಿದೆ. ಆಸ್ಟ್ರೇಲಿಯದ ರಾಜ್ಯಗಳಲ್ಲೆಲ್ಲ ಟಾಸ್ಮೇನಿಯ ಅಧಿಕ ಪರಿಮಾಣದಲ್ಲಿ ಅಲ್ಯೂಮಿನಿಯಂ, ಸತು ಮತ್ತು ತಾಮ್ರ ಉತ್ಪಾದಿಸುತ್ತದೆ.
ಕೈಗಾರಿಕೆ: ಲೋಹಗಾರಿಕೆ, ಮರಗಾರಿಕೆ, ಅಲ್ಯೂಮಿನಿಯಂ ಕೈಗಾರಿಕೆ, ಜಾಮ್ ಮತ್ತು ಹಣ್ಣುಗಳ ಕೈಗಾರಿಕೆ, ಹೈನುಗಾರಿಕೆ, ಇಟ್ಟಿಗೆ, ಹೆಂಚು, ಪಿಂಗಾಣಿ, ಚರ್ಮಗಾರಿಕೆ ಮುಂತಾದವು ಮುಖ್ಯ ಕೈಗಾರಿಕೆಗಳು. ರಾಸಾಯನಿಕ ವಸ್ತುಗಳ ಕೈಗಾರಿಕೆ, ಸಿಮೆಂಟ್, ಕಾರ್ಬೈಡ್ ಮತ್ತು ಎಲೆಕ್ಟ್ರೋಡ್ ಕೈಗಾರಿಕೆ, ಮರದ ಸಾಮಾನುಗಳು, ವ್ಯವಸಾಯೋಪಕರಣಗಳು ಮುಂತಾದ ಕೈಗಾರಿಕೆಗಳು ಗೌಣಸ್ಥಾನ ಪಡೆದಿವೆ. ಬೃಹದ್ಗಾತ್ರದ ಕೈಗಾರಿಕೆಗಳು ಹೋಬಾರ್ಟ್ ಮತ್ತು ಲಾನ್ಸೆಸ್ಟನ್‍ಗಳಲ್ಲಿ ಕೇಂದ್ರೀಕೃತವಾಗಿವೆ. ಇದರಿಂದಾಗಿ ರಾಸಾಯನಿಕ ಪದಾರ್ಥಗಳು, ಸಿಮೆಂಟ್, ಕಬ್ಬಿಣ, ಕಾಗದ, ಕೃತಕ ರೇಷ್ಮೆ, ಉಣ್ಣೆ ಮತ್ತು ಇತರ ಗಿರಣಿ ಕೈಗಾರಿಕೆಗಳು ಹೆಚ್ಚು ಪ್ರಾಮುಖ್ಯ ಪಡೆಯುತ್ತಿವೆ. ಕಚ್ಚಾಪದಾರ್ಥಗಳ ಲಭ್ಯತೆ, ದಕ್ಷಿಣ ಆಸ್ಟ್ರೇಲಿಯದ ವಾಣಿಜ್ಯ ಕೇಂದ್ರಗಳ ಸಾಮೀಪ್ಯ, ಭೌಗೋಳಿಕ ಸನ್ನಿವೇಶ, ಜಲವಿದ್ಯುತ್ತಿನ ಸೌಕರ್ಯ, ತಂಪಾದ ವಾಯುಗುಣ ಇವು ಇಲ್ಲಿ ಕೈಗಾರಿಕೆಗಳು ಬೆಳೆಯಲು ಮುಖ್ಯ ಕಾರಣಗಳು. ಗ್ರೇಟ್ ಲೇಕ್ ಮತ್ತು ಷನೌನ್ ವಿದ್ಯುತ್ ಯೋಜನೆಗಳು ಹೋಬಾರ್ಟ್ ಮತ್ತು ಅದರ ಸುತ್ತಮುತ್ತಿನ ಪ್ರದೇಶಕ್ಕೆ ವಿದ್ಯುತ್ತನ್ನು ಸರಬರಾಜು ಮಾಡುತ್ತದೆ. ಲೇಕ್ ಮಾರ್ಗರೆಟ್-ಜಿಹಾನ್; ಜಿಹಾನ್-ರೋಸ್‍ಬರಿ ಇತರ ವಿದ್ಯುತ್ ಯೋಜನೆಗಳು.

ವ್ಯಾಪಾರ, ಸಾರಿಗೆ: ಲೋಹಸಾಮಗ್ರಿ, ಹಣ್ಣು; ಜಾಮ್ ಮತ್ತು ಇತರ ಸಿದ್ಧ ಆಹಾರವಸ್ತುಗಳು, ಆಲೂಗೆಡ್ಡೆ , ಹೈನುವಸ್ತುಗಳು, ಉಣ್ಣೆ, ಚರ್ಮ ಮತ್ತು ಮರದ ದಿಮ್ಮಿಗಳು ರಫ್ತಾಗುತ್ತವೆ. ಆಹಾರಧಾನ್ಯ ಮತ್ತು ಪಾನೀಯ, ಯಂತ್ರ, ಗಿರಣಿ ಸರಕು ಆಮದಾಗುತ್ತವೆ.

ಟಾಸ್ಮೇನಿಯದ ಹೆಚ್ಚು ಭಾಗ ಪರ್ವತಮಯವಾಗಿರುವುದರಿಂದ ಸಂಚಾರ ಮಾರ್ಗಗಳು ಅಷ್ಟಾಗಿ ಅಭಿವೃದ್ಧಿ ಹೊಂದಿಲ್ಲ. ಒಟ್ಟು 746 ಮೈ. ರೈಲುಮಾರ್ಗಗಳಿವೆ. ರಸ್ತೆಗಳ ಉದ್ದ 13,000ಮೈ. ವಾಯು ಮತ್ತು ಸಮುದ್ರಮಾರ್ಗಗಳೂ ಮುಖ್ಯವಾದವು.
ಜನ: 18ನೆಯ ಶತಮಾನದಲ್ಲಿ ಇದು ಬ್ರಿಟಿಷರ ವಸಾಹತುಗಳಲ್ಲಿ ಒಂದಾಗಿತ್ತು. ಅವರು ಇಲ್ಲಿಯ ಆದಿವಾಸಿಗಳನ್ನು ಮೂಲೋತ್ಪಾಟನ ಮಾಡಿದರು. ಇಲ್ಲಿಯ ಹೆಚ್ಚು ಜನ ಬ್ರಿಟಿಷ್ ವಂಶಸ್ಥರು. ಆಸ್ಟ್ರೇಲಿಯದಲ್ಲಿ ಜನಿಸಿದವರೂ ಉಂಟು. ಇದೊಂದು ಬಿಳಿಯರ ಸೀಮೆ. ಆಸ್ಟ್ರೇಲಿಯದ ಇತರ ರಾಜ್ಯಗಳಿಗಿಂತ ಇಲ್ಲಿ ಗ್ರಾಮೀಣ ಜನಸಂಖ್ಯೆ ಅಧಿಕ. 16ನೆಯ ವರ್ಷದವರೆಗಿನ ಎಲ್ಲ ಮಕ್ಕಳಿಗೂ ಉಚಿತ ಕಡ್ಡಾಯ ಶಿಕ್ಷಣವಿದೆ.
ಟಾಸ್ಮೇನಿಯದ ರಾಜಧಾನಿ ಹೋಬಾರ್ಟ್‍ನ ಜನಸಂಖ್ಯೆ 52,900 (1970 ಅಂ.). ಇದು ಟಾಸ್ಮೇನಿಯದ ಅತ್ಯಂತ ದೊಡ್ಡ ಪಟ್ಟಣ, ಪ್ರಮುಖ ವಾಣಿಜ್ಯ ಕೇಂದ್ರ ಮತ್ತು ಪ್ರವಾಸಿ ಕೇಂದ್ರ. ಟಾಸ್ಮೇನಿಯದ ಆಗ್ನೇಯ ಭಾಗದ ತೀರದಲ್ಲಿದೆ. ಇತರ ಪಟ್ಟಣಗಳಲ್ಲಿ ಮುಖ್ಯವಾದವು ಲಾನ್ಸೆಸ್ಟನ್ (4,725) ಮತ್ತು ಡೆವನ್ ಪೋರ್ಟ್ (19,240).
(ಕೆ.ಆರ್.)

ಇತಿಹಾಸ: ಟಾಸ್ಮೇನಿಯ ದ್ವೀಪವನ್ನು ಮೊದಲ ಬಾರಿಗೆ ಕಂಡ (1642) ಐರೋಪ್ಯ ಆಬೆಲ್ ಟಾಸ್ಮಾನ್ ಎಂಬ ಡಚ್ ನಾವಿಕ. ಈಸ್ಟ್ ಇಂಡೀಸ್ ದ್ವೀಪಗಳ ರಾಜ್ಯಪಾಲ ಆಂಟನ್ ವಾನ್ ಡೀಮೆನನ ಆದೇಶದಂತೆ ಟಾಸ್ಮಾನ್ ಈ ನೌಕಾಯಾನ ಮಾಡಿದನಾದ್ದರಿಂದ ಬಹಳ ಕಾಲ ಇದಕ್ಕೆ ವಾನ್ ಡೀಮೆನ್ಸ್ ಲ್ಯಾಂಡ್ ಎಂಬ ಹೆಸರಿತ್ತು. ಅನಂತರ ಫ್ರೆಂಚ್ ಹಾಗೂ ಇಂಗ್ಲಿಷ್ ನಾವಿಕರು ಟಾಸ್ಮೇನಿಯದ ಸುತ್ತಲಿನ ಇತರ ದ್ವೀಪಗಳನ್ನು ಪತ್ತೆಹಚ್ಚಿದರು. ಮೊಟ್ಟಮೊದಲು 1804ರಲ್ಲಿ ಬ್ರಿಟಿಷರು ಹೋಬಾರ್ಟಿನಲ್ಲಿ ನೆಲೆ ಸ್ಥಾಪಿಸಿದರು. ಇಲ್ಲಿ ನೆಲಸಿದವರಲ್ಲಿ ದಂಡನೆಗೆ ಒಳಗಾದ ಖೈದಿಗಳೇ ಬಹುಮಂದಿ. ಸ್ವತಂತ್ರ ಪ್ರಜೆಗಳು ಅಲ್ಪಸಂಖೈಯಲ್ಲಿದ್ದರು. ಈ ಖೈದಿಗಳನ್ನು ನಾರ್ಫೋಕ್ ದ್ವೀಪಗಳಿಂದ ಇಲ್ಲಿಗೆ ಸಾಗಿಸಲಾಗಿದೆ. ಸ್ವತಂತ್ರ ಪ್ರಜೆಗಳನ್ನು ಆಕರ್ಷಿಸಲು ಅವರಿಗೆ ಇಲ್ಲಿ ಭೂಹಿಡುವಳಿಗಳನ್ನು ನೀಡಲಾಗುತ್ತಿತ್ತು. ತಿಮಿಂಗಿಲಗಾರಿಕೆ ಮತ್ತು ಕುರಿಸಾಕಣೆಗೆ ಸೌಲಭ್ಯಗಳನ್ನು ಒದಗಿಸಲಾಗುತ್ತಿತ್ತು. ಈ ದ್ವೀಪದ ಆಡಳಿತ ಆರಂಭದಲ್ಲಿ ನ್ಯೂ ಸೌತ್ ವೇಲ್ಸ್‍ನ ಲೆಫ್ಟೆನಂಟ್ ಗವರ್ನರನ ಮೂಲಕ ನಡೆಯುತ್ತಿತ್ತು.

ಹೊರ ಪ್ರಪಂಚದ ಸಂಪರ್ಕ ಏರ್ಪಡುವುದಕ್ಕೆ ಮುಂಚೆ ಇಲ್ಲಿ ನೆಲಸಿದ್ದ ಮೂಲ ಜನರು ಶಿಲಾಯುಗ ಪ್ರವೃತ್ತಿಯವರು, ಬಹಳಮಟ್ಟಿಗೆ ಆಹಾರವನ್ನು ಹುಡುಕಿ ಶೇಖರಿಸುವ ಅಲೆಮಾರಿ ಜನಾಂಗದವರು. ಇವರು ಸಣ್ಣ ಗುಡಿಸಲುಗಳಲ್ಲಿ ವಾಸಿಸುತ್ತಿದ್ದರು. ದೇಹದ ಮೇಲೆ ಇದ್ದಿಲು ಮುಂತಾದ ಪುಡಿಗಳನ್ನು ಲೇಪಿಸಿಕೊಳ್ಳುತ್ತಿದ್ದರು. ಇವರಲ್ಲಿ ಬಹುಪತ್ನೀತ್ವ ಪದ್ಧತಿ ಇತ್ತು. ಮೀನು ಹಿಡಿಯಲು ಇವರು ಭರ್ಜಿಗಳನ್ನೂ  ಸಮುದ್ರಯಾನಕ್ಕೆ ತೆಪ್ಪಗಳನ್ನೂ ಉಪಯೋಗಿಸುತ್ತಿದ್ದರು. ಹೊರಗಿನ ಜನ ಇಲ್ಲಿ ಬಂದು ನೆಲಸಿದ ಬಳಿಕ ಇವರು ಕ್ರಮೇಣ ನಾಗರಿಕರಾಗತೊಡಗಿದರು.

ಇಲ್ಲಿಯ ಸಂಪತ್ತಿನ ಅಭಿವೃದ್ಧಿಯಾಗಿ ಜನಸಂಖ್ಯೆ ಹೆಚ್ಚಿದ ಮೇಲೆ 1825ರಲ್ಲಿ ಇದೊಂದು ವಸಾಹತು ಎಂದು ಪರಿಗಣಿತವಾಯಿತು. ಈ ದ್ವೀಪಗಳ ಮೇಲೆ ನ್ಯೂ ಸೌತ್ ವೇಲ್ಸ್ ಹೊಂದಿದ್ದ ಅಧಿಕಾರವನ್ನು ತೆಗೆದು ಸ್ವತಂತ್ರ ಆಡಳಿತ ವ್ಯವಸ್ಥೆಯನ್ನು ರೂಪಿಸಲಾಯಿತು. 1850ರ ವೇಳೆಗೆ ಕಾರ್ಯಾಂಗ ಹಾಗೂ ಶಾಸಕಾಂಗಗಳು ಅಸ್ತಿತ್ವಕ್ಕೆ ಬಂದಿದ್ದುವು. 1856ರಲ್ಲಿ ಇದು ಒಂದು ರಾಜ್ಯವೆಂದು ಪರಿಗಣಿತವಾಯಿತು. ಇದಕ್ಕೊಂದು ಸಂವಿಧಾನವನ್ನು ರಚಿಸಲಾಯಿತು. ದ್ವಿಸದನ ಸಂಸತ್ತು ಅಸ್ತಿತ್ವಕ್ಕೆ ಬಂದು ಪ್ರಜಾಸರ್ಕಾರ ಆರಂಭವಾಯಿತು. ಇದು ಆಸ್ಟ್ರೇಲಿಯ ಒಕ್ಕೂಟವನ್ನು ಸೇರಿದ ರಾಜ್ಯವಾದ್ದು 1901ರಲ್ಲಿ.
(ಜಿ.ಬಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ